ತೀರ್ಥಹಳ್ಳಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ – ಬಾಲಕಿ ಮೃತ : ತೀರ್ಥಹಳ್ಳಿ ಉದ್ವಿಗ್ನ – ಎಬಿವಿಪಿಯಿಂದ ಅಹೋರಾತ್ರಿ ಧರಣಿ

 

ಪ್ರೌಡಶಾಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ಬೆಳಕಿಗೆ ಬಂದಿದ್ದು, ಆಕೆ ಮೃತಳಾಗಿದ್ದರಿಂದ ಶನಿವಾರ ತೀರ್ಥಹಳ್ಳಿ ಉದ್ವಿಗ್ನವಾಗಿದೆ.

ಬಾಳೇಬೈಲಿನ ಕೃಷ್ಣಪ್ಪ ಎಂಬುವರ ಮಗಳು ತೀರ್ಥಹಳ್ಳಿ ಪದವಿಪೂರ್ವ ಕಾಳೇಜಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಕ್ಟೋಬರ್ 29ರಂದು ಶಾಲೆಗೆ ಹೊರಟವಳನ್ನು ದುಷ್ಕರ್ಮಿಗಳು ಕಾರಿನಲ್ಲಿ ಕರೆದುಕೊಂಡು ಹೋಗಿ ಸಮೀಪದ ಆನಂದಗಿರಿ ಗುಡ್ಡದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಾನೀಯದಲ್ಲಿ ಮತ್ತು ಬರಿಸುವ ಮಾತ್ರೆ ಬೆರೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಾರುತಿ ಓಮ್ನಿ ಕಾರಿನಲ್ಲಿ ಕಾರಿನಲ್ಲಿ ಈಕೆಯನ್ನು ಕರೆದೊಯ್ದಿದ್ದ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಸಂಜೆ ಮನೆಗ ಬಂದ ಆಕೆ ಆರೋಗ್ಯ ಸರಿ ಇಲ್ಲ ಎಂದು ಮಂಕಾಗಿದ್ದನ್ನು ಕಂಡ ತಾಯಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸು ಮಾಡಿದ್ದಾರೆ. ಶಿವಮೊಗ್ಗದಲ್ಲಿ ಮಣಿಪಾಲಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಆದರೆ, ಅಸ್ವಸ್ಥ ಬಾಲಕಿ ಶುಕ್ರವಾರ ಸಂಜೆ ಮಣಿಪಾಲ ಆಸ್ಟತ್ರೆಯಲ್ಲಿ ಮೃತಪಟ್ಟಿದ್ದಾಳೆ. ಶನಿವಾರ ತೀರ್ಥಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆದಿದೆ.

ತೀರ್ಥಹಳ್ಳಿ ಉದ್ವಿಗ್ನ :

ಬಾಲಕಿ ಶವವನ್ನು ತೀರ್ಥಹಳ್ಳಿಗೆ ತರಲಾಗುತ್ತಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಉದ್ವಿಗ್ನ ಪರಿಸ್ತಿತಿ ಉಂಟಾಗಿ ಅಘೋಷಿತ ಬಂದ್ ಏರ್ಪಟ್ಟಿತ್ತು. ಬಾಲಕಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಂಗಡಿ ಮುಂಗಟ್ಟು ಬಾಗಿಲು ಮುಚ್ಚಿದವು. ಶನಿವಾರ ಕನ್ನಡ ರಾಜ್ಯೋತ್ಸವ ಮೆರವಣಿಗೆ ರದ್ದು ಮಾಡಲಾಯಿತು. ಹಲವು ಸಂಘ ಸಂಸ್ಥೆಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೂಡಲೆ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಲಾಯಿತು.

ರಸ್ತೆ ತಡೆ :

ಬಾಲಕಿಯ ಮನೆ ಇರುವ ಬಾಳೆಬೈಲು ಗ್ರಾಮದಲ್ಲಿ ನಾಗರಿಕರು ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ಕಾರು, ಒಂದು ಬೈಕ್ ಅನ್ನೂ ಜಖಂಗೊಳಿಸಲಾಯಿತು. ಸ್ಥಳಕ್ಕೆ ಐಜಿಪಿ ಪರಶಿವಮೂರ್ತಿ, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ಸೇರಿ ಹಿರಿಯ ಅಧಿಕಾರಿಗಳು ಬಂದಿದ್ದು, ನಿರ್ವಹಣೆ ಮಾಡಿದ್ದಾರೆ.

ತಕ್ಕ ಶಿಕ್ಷೆ ನೀಡಿ :

ನನ್ನ ಮಗಳ ಸಾವಿಗೆ ಕಾರಣವಾದವರಿಗೆ ತಕ್ಕ ಶಿಕ್ಷೆ ನೀಡಿ ಎಂದು ಬಾಲಕಿಯ ತಂದೆ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಚಯದ ಯುವಕ, ತನ್ನ ಸಂಗಡಿಗರು ಗುರುವಾರ ಕಾರಿನಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾರೆ. ಗಂಟೆ ನಂತರ ರಸ್ತೆ ಪಕ್ಕದಲ್ಲಿ ದೂಡಿಹೋಗಿದ್ದಾರೆ. ರಸ್ತೆ ಪಕ್ಕದಲ್ಲಿ ಬಿದ್ದಿದ್ದನ್ನು ನೋಡಿದ ದಾರಿಹೋಕರು, ಗುರುತಿನ ಚೀಟಿಯಲ್ಲಿದ್ದ ಮೊಬೈಲ್ ನಂಬರ್ ಆಧರಿಸಿ ಮನೆಗೆ ಮಾಹಿತಿ ನೀಡಿದ್ದಾರೆ.

ಮನೆಗೆ ಕರೆತಂದ ಮೇಲೆ ಪ್ರಜ್ಞೆ ಬಂದಿದ್ದು, ವಿಪರೀತ ವಾಂತಿ ಮಾಡಿದ್ದಾಳೆ. ತನ್ನ ಮೇಲೆ ಅತ್ಯಾಚಾರ ನಡೆದಿಲ್ಲ. ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಯುವ ಮೊದಲು ಹೇಳಿದ್ದಾಳೆ ಎಂದು ಅವರು ತಿಳಿಸಿದ್ದಾರೆ. ಶನಿವಾಎ ಶವ ಪರೀಕ್ಷೆ ನಡೆಸಿ ಹೆತ್ತವರಿಗೆ ನೀಡಲಾಗಿದೆ. ಮಣಿಪಾಲ, ಶಿವಮೊಗ್ಗ ಹಾಗೂ ತೀರ್ಥಹಳ್ಳಿಗಳಲ್ಲಿ ಪ್ರಕರಣ ದಾಖಲಾಗಿದೆ.

ತಪ್ಪಿತಸ್ಥರ ಬಂಧನಕ್ಕೆ ಎಬಿವಿಪಿಯಿಂದ ಅಹೋರಾತ್ರಿ ಹೋರಾಟ :

ಇನ್ನೊಂದೆಡೆ ಕಾಮುಕರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಶಿವಮೊಗ್ಗದ ಎಸ್ಪಿ ಕಚೇರಿ ಎದುರು ಎಬಿವಿಪಿ ಕಾರ್ಯಕರ್ತರು ಆಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದಾರೆ. ಅಲ್ಲದೇ, ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಬಿವಿಪಿ ತಿಳಿಸಿದೆ.

Date